ಯಾರ್ ಯಾರ್ ಜೀವನದಲ್ಲಿ ಭಗವಂತ ಏನೇನ್ ಬರೆದಿರುತ್ತಾನೋ ಮೊದಲೇ ಯಾರಿಗೂ ಗೊತ್ತಿರಲ್ಲ. ವಿಧಿ ಯಾವಾಗ ಹೇಗೆ ತನ್ನ ಘೋರ ಆಟವನ್ನ ಆಡಿಬಿಡುತ್ತೋ ಅದು ಕೂಡ ಹೇಳೋಕಾಗಲ್ಲ. ಹೌದು ಒಂದು ಚಂದದ ಸಂಸಾರ ಅಮ್ಮನನ್ನ ಕಳೆದುಕೊಂಡಿದ್ದ ಇಬ್ಬರು ಹೆಣ್ಣು ಮಕ್ಕಳಿಗೆ ತಾನೇ ಅಪ್ಪ ಅಮ್ಮ ಆಗಿ ಮಕ್ಕಳನ್ನ ಅಜ್ಜಿ ತಾತರ ಮನೆಯಲ್ಲಿಟ್ರು ಬಹಳ ಚಂದವಾಗಿ ನೋಡಿಕೊಳ್ಳುತ್ತಿದ್ದ ಅಪ್ಪ, ಮಕ್ಕಳಿಬ್ಬರಿಗೂ ಒಟ್ಟಿಗೆ ಮದುವೆ ಮಾಡಲು ನಿರ್ಧರಿಸಿ ಎಲ್ಲ ಸಿದ್ಧತೆಯನ್ನ ಮಾಡಿಕೊಂಡು ಮನೆಯಲ್ಲಿ ಮದುವೆ ಚಪ್ಪರ, ಸಡಗರ ಸಂಭ್ರಮ, ಇನ್ನೇನು ಮದುವೆ ಮಂಟಪಕ್ಕೆ ಎಲ್ಲರು ಪ್ರಯಾಣ ಬೆಳೆಸಿ ನಾಳೆ ಮಗಳಿಗೆ ತಾಳಿ ಕಟ್ಟುವ ಶುಭ ಗಳಿಗೆಯನ್ನ ಕಣ್ತುಂಬಿಕೊಂಡು ಅಬ್ಬ ಜೀವನ ಸಾರ್ಥಕ ಅಂತ ನಿಟ್ಟುಸಿರು ಬಿಡಬೇಕಿದ್ದ ಅಪ್ಪ ಇಂದು ಉಸಿರಾಡುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ಅಪಘಾತ ಅನ್ನೋ ಸೋಗಿನಲ್ಲಿ ಬಂದ ಜವರಾಯ ಅಪ್ಪನನ್ನ ಬಲಿಪಡೆದು ತನ್ನೂರಿಗೆ ಕರೆದೋಯ್ದಿದ್ದಾನೆ. ಅಪ್ಪನಿಲ್ಲದ ಮನೆಯಲ್ಲಿ ಇದೀಗ ಮದುವೆಯ ಸಂಭ್ರಮ ಇಲ್ಲ ಸೂತಕದ ಛಾಯೆ ಅವರಿಸಿದ್ದು, ಮದುವೆಗೆ ಬಂದ ಸಂಬಂಧಿಕರು ಈಗ ಮಸಣಕ್ಕೆ ಹೋಗಿ ಸಮಾಧಿ ಮಾಡಬೇಕಿದೆ. ಯಪ್ಪಾ ಎಂಥ ಘಟನೆ, ಇದೆಲ್ಲವನ್ನ ಎಂತ ಕಲ್ಲು ಮನಸ್ಸಿನವರು ನೋಡಿದ್ರು ಕೂಡ ಅವ್ರ ಕಣ್ಣಾಲೆ ತೇವ ಆಗದೆ ಇರದು.
ಅಪಘಾತದಲ್ಲಿ ಅಪ್ಪನ ಸಾವು, ಅಪ್ಪನಿಲ್ಲದೆ ಮದುವೆ ಹೇಗೆ?!
ಹೌದು ತನ್ನೆರಡು ಕಣ್ಣುಗಳಂತೆ ಮಕ್ಕಳಿಬ್ಬರನ್ನು ನೋಡಿಕೊಂಡಿದ್ದ ಅಪ್ಪ ಮಕ್ಕಳ ಮದುವೆಯ ಹಿಂದಿನ ದಿನವೇ ಸಾವಿಗೀಡಾಗಿದ್ದಾರೆ. ತನ್ನ ಮುದ್ದುಮಕ್ಕಳ ಮದುವೆಯನ್ನು ಕಣ್ತುಂಬಾ ನೋಡಬೇಕು ಅಂದುಕೊಂಡಿದ್ದ ಅಪ್ಪನ ಆಸೆಗೆ ವಿಧಿಯಾಟ ತಣ್ಣೀರು ಎರಚಿ ತನ್ನೊಟ್ಟಿಗೆ ಅಪ್ಪನನ್ನ ಕರೆದುಕೊಂಡು ಹೋಗಿದೆ. ಹೌದು ಮದ್ವೆಗೆ ಇನ್ನೇನು ಒಂದೇ ದಿನ ಇದೆ ಅನ್ನುವಾಗಲೇ ಶಿವಮೊಗ್ಗದ ಸಾಗರ ತಾಲೂಕಿನ ಆಚಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚನ್ನಕೊಪ್ಪ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ 58 ವರ್ಷದ ಮಂಜುನಾಥ ಗೌಡ ಮೃತಪಟ್ಟಿದ್ದಾರೆ. ಇಬ್ಬರು ಪುತ್ರಿಯರ ವಿವಾಹ ಕಣ್ಣುಂಬಿ ಕೊಂಡು ಸಂತಸ ಪಡಬೇಕಿದ್ದ ತಂದೆ ಮದುವೆಯ ಮುನ್ನಾ ದಿನ ಅಪಘಾತದಲ್ಲಿ ಸಾವನ್ನಪ್ಪಿದ್ದು, ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.
ಇನ್ನು ಮಂಜುನಾಥ ಗೌಡ ಮೂಲತಃ ಬನವಾಸಿಯವರು. ಆದ್ರೆ ತಮ್ಮ ಇಬ್ಬರು ಹೆಣ್ಣುಮಕ್ಕಳ ಮದುವೆ ನೆರವೇರಿಸಲು ಕುಟುಂಬ ಸಹಿತ ಚನ್ನಕೊಪ್ಪ ಗ್ರಾಮದ ತಮ್ಮ ಮಾವ ರುದ್ರಪ್ಪ ಗೌಡರ ಮನೆಗೆ ಬಂದಿದ್ದರು. ಕೆಂಜಗಾಪುರದ ಶ್ರೀ ವೀರಭದ್ರೇಶ್ವರ ದೇವಾಲಯ ಆವರಣದ ಸಭಾಭವನದಲ್ಲಿ ಇಬ್ಬರು ಪುತ್ರಿಯರ ಮದುವೆ ಸಿದ್ಧತೆ ನಡೆಸಿದ್ದರು. ಹೀಗಾಗಿ ಮದುವೆ ಕಾರ್ಯಕ್ಕೆ ಅಗತ್ಯ ಸಾಮಗ್ರಿ ಖರೀದಿಸಲು ಆನಂದಪುರಕ್ಕೆ ಮನೆಯಿಂದ ಹೊರಟಿದ್ದರು, ಆಗ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದು ಬಸ್ ನಿಲ್ದಾಣದ ಕಡೆಗೆ ಪುತ್ರಿಯರೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಮಂಜುನಾಥ ಗೌಡರಿಗೆ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಮಂಜುನಾಥ ಗೌಡರ ಶವದ ಮರಣೋತ್ತರ ಪರೀಕ್ಷೆ ನಂತರ ಬನವಾಸಿಯಲ್ಲಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಲಾಗಿದೆ. ಆದ್ರೆ ಡಿಕ್ಕಿ ಹೊಡೆದ ಕಾರು ಚಾಲಕ ಪರಾರಿಯಾಗಿದ್ದು, ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಸಿಂಗಲ್ ಪೇರೆಂಟ್ ಆಗಿ ನಾನು ಸ್ಟ್ರಾಂಗ್ ಇರಬೇಕು! ವಿಚ್ಚೇದನ, ಸಂಸಾರ ಕುರಿತು ನಟಿ, ನಿರೂಪಕಿ ಜಾನ್ಹವಿ ಮಾತು!
ಪುತ್ರಿಯರಿಬ್ಬರ ಆಕ್ರಂದನ!ಸೂತಕದ ಮನೆಯಲ್ಲಿ ನಡೆಯುತ್ತಾ ಮದುವೆ?
ಇದರ ಜೊತೆಗೆ ಈ ಹೆಣ್ಣು ಮಕ್ಕಳಿಗೆ ಮತ್ತೊಂದು ದೌರ್ಭಾಗ್ಯ ಅಂದ್ರೆ ಕಳೆದ ಮೂರು ವರ್ಷಗಳ ಹಿಂದೆ ಮಂಜುನಾಥ ಗೌಡರ ಪತ್ನಿ ಬನವಾಸಿಯಲ್ಲಿ ಟ್ರ್ಯಾಕ್ಟರ್ ಅಪಘಾತದಲ್ಲಿ ಸಾವಿಗೀಡಾಗಿದ್ದರು. ಈಗ ಅಮ್ಮನಂತೆ ಸಾಕಿದ ಅಪ್ಪ ಕೂಡ ಇನ್ನಿಲ್ಲವಾಗಿದ್ದು ಪುತ್ರಿಯರ ನೋವು ಯಾವ ಶತ್ರುವಿಗೂ ಬೇಡ ಅನ್ನಬಹುದು. ಅಮ್ಮ ತೀರಿ ಹೋದಾಗಿನಿಂದ ಅಂದಿನಿಂದ ಮಂಜುನಾಥ ಗೌಡ ಅವರೇ ತಮ್ಮ ಹೆಣ್ಣುಮಕ್ಕಳನ್ನ ಬಹಳ ಜೋಪಾನವಾಗಿ ಸಾಕಿದ್ದರು. ಆದರೆ ವಿಧಿಯ ಆಟದ ಮುಂದೆ ಎಲ್ಲವು ಶೂನ್ಯ. ಈ ಹಿಂದೆ ಅಮ್ಮನನ್ನು ಕಳೆದುಕೊಂಡ ಹೆಣ್ಣುಮಕ್ಕಳು ಈಗ ಅಪ್ಪನನ್ನೂ ಕಳೆದುಕೊಂಡು ತಬ್ಬಲಿಗಳಾಗಿದ್ದಾರೆ.
ಆದ್ರೆ ಈ ಮೊದಲೇ ನಿಗದಿ ಮಾಡಿರುವಂತೆ ಇಂದು ಕೆಂಜಗಾಪುರದಲ್ಲಿ ಮಂಜುನಾಥ ಗೌಡರ ಇಬ್ಬರು ಪುತ್ರಿಯರ ವಿವಾಹ ನೆರವೇರಲಿದೆ. ಹಿರಿಯ ಪುತ್ರಿ ಪಲ್ಲವಿ ಮತ್ತು ದ್ವಿತೀಯ ಪುತ್ರಿ ಪೂಜಾರನ್ನು ಹಾವೇರಿ ತಾಲೂಕಿನ ಯತ್ನಳ್ಳಿ ಗ್ರಾಮದ ಸಿದ್ದಪ್ಪ ಗೌಡರ ಇಬ್ಬರು ಪುತ್ರರು ಮದುವೆಯಾಗಲಿದ್ದಾರೆ. ಆದರೂ ಕೂಡ ಅಪ್ಪನ ಸಾವಿನ ಸುದ್ದಿಯೊಂದಿಗೆ ತಂದೆಯಿಲ್ಲದ ಮಂಟಪದಲ್ಲಿ ತಾಳಿಗೆ ಪುತ್ರಿಯರು ಕೊರಳೊಡ್ದುವುದು ಕಷ್ಟವಾದ್ರೂ ಕೂಡ ಮದುವೆ ನಡೆಯಲಿದೆ ಅಂತ ಹೇಳಲಾಗ್ತಿದೆ. ಒಟ್ಟಿನಲ್ಲಿ ಸಾವೆಂದರೆ ಹಾಗೇ ಅದು ಹೇಳಿ ಕೇಳಿ ಬರುವುದಿಲ್ಲ. ಸುಮ್ಮನೆ ಬರುತ್ತದೆ, ಎಲ್ಲರನ್ನೂ ಶೋಕದಲ್ಲಿ ಮುಳುಗಿಸುತ್ತದೆ ಅಷ್ಟೆ. ಸತ್ತವರೂ ಹೋದರು, ಬದುಕುಳಿದವರು ಅವರ ನೆನಪಲ್ಲಿ ಒದ್ದಾಡುತ್ತಾಲೇ ಇರಬೇಕು. ಬಂದಿದ್ದೆಲ್ಲವನ್ನ ಅನುಭವಿಸುತ್ತ ಇರುವಷ್ಟು ದಿನ ತಮ್ಮ ಪಾಲಿನದನ್ನ ಸ್ವೀಕರಿಸುತ್ತ ಸಾಗೋದೇ ನಿಜ ಜೀವನ ಅಲ್ವಾ?
ಇದನ್ನೂ ಓದಿ: ಪತ್ನಿಯನ್ನ ಓದಿಸಿ ಸರ್ಕಾರಿ ನೌಕರಿ ಕೊಡಿಸಿದ ಪತಿ; ನೌಕರಿ ಸಿಕ್ಕ ಮೇಲೆ ಪತ್ನಿ ಶುರು ಮಾಡುದ್ಲು ನವರಂಗಿ ಆಟ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram