Kavya Ys Ifs: ಬದುಕಿನಲ್ಲಿ ಅಂದುಕೊಂಡಿದ್ದನ್ನು ಸಾಧಿಸಬೇಕು ಎಂಬ ಛಲ ಹೊತ್ತ ವೈ.ಎಸ್ .ಕಾವ್ಯ ಅವರು ಕುಟುಂಬದ ಬೆಂಬಲದಿಂದ ಈಗ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. ಸತತ ಪರಿಶ್ರಮದಿಂದ ಏನನ್ನಾದರೂ ಸಾಧಿಸಬಹುದು ಎಂಬುದನ್ನು ತೋರಿಸಿದ್ದಾರೆ. ವೈ.ಎಸ್ .ಕಾವ್ಯ ಅವರ ಸಾಧನೆಯ ಹಾದಿಯ ಬಗ್ಗೆ ತಿಳಿಯೋಣ.
ವೈ.ಎಸ್ .ಕಾವ್ಯ ಅವರ ಶಿಕ್ಷಣ ಬದುಕಿನ ನೋಟ :-
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ವಿ.ಯರದಕೆರೆ ಎಂಬ ಹಳ್ಳಿಯಲ್ಲಿ ಜನಿಸಿದವರು. ಇವರ ತಂದೆ ಸೋಮಶೇಖರಪ್ಪ, ತಾಯಿ ರತ್ನಮ್ಮ ಹಾಗೂ ಇವರ ಸಹೋದರಿ ವೈ.ಎಸ್ ಮಮತಾ. ಯರದಕೆರೆಯಲ್ಲಿ ಇವರು ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ನಂತರ ಮುಂದಿನ ಶಿಕ್ಷಣಕ್ಕೆ ಕಡೂರು ಪಟ್ಟಣದ ತರಳಬಾಳು ಸಂಸ್ಥೆ ನಡೆಸುವ ವೇದಾವತಿ ಬಾಲಿಕ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿಯ ವರೆಗೆ ವಿದ್ಯಾಭ್ಯಾಸ ಪಡೆದರು. SSLC ಯಲ್ಲಿ ಉತ್ತಮ ಅಂಕ ಗಳಿಸಿ B.L.R ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡು, ದ್ವಿತೀಯ ಪಿಯುಸಿಯಲ್ಲಿ ಕೆಲವೇ ಅಂಕಗಳಲ್ಲಿ ಪ್ರಥಮ ಸ್ಥಾನವನ್ನು ಕಳೆದುಕೊಂಡರು. ಓದುವ ಛಲ ಇದ್ದರೆ ವಿದ್ಯೆ ನಮ್ಮ ಕೈ ಹಿಡಿಯುತ್ತದೆ ಎನ್ನುವಂತೆ ಅಂಬೇಡ್ಕರ್ ತಾಂತ್ರಿಕ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದರು.
ವೈ.ಎಸ್ .ಕಾವ್ಯ ಅವರ ಐ ಎಫ್ ಎಸ್ ಸಾಧನೆ :-
ಎಂಜಿನಿಯರಿಂಗ್ ಪದವಿ ಮುಗಿಸಿದ ಬಳಿಕ ಮೈಂಡ್ ಟ್ರಿ ಎಂಬ ಕಂಪನಿಯಲ್ಲಿ ಉದ್ಯೋಗ ಸಿಕ್ಕಿತ್ತು. ಉದ್ಯೋಗ ಸಿಕ್ಕಿತು ಎಂದು ಅಲ್ಲಿಗೆ ಸಂತೃಪ್ತಿ ಪಡದೆ ತನ್ನ ಕನಸಿನಂತೆ ಯುಪಿಎಸ್ ಪರೀಕ್ಷೆಗೆ ಉದ್ಯೋಗ ಮಾಡುತ್ತಲೇ ತಯಾರಿ ಆರಂಭಿಸಿದರು. ನಾಲ್ಕು ವರುಷ ಉದ್ಯೋಗ ಮಾಡಿ ನಂತರ ಸಾಧನೆಯ ಹಾದಿಗೆ ಸಿಕ್ಕಿರುವ ಉದ್ಯೋಗವನ್ನು ತೊರೆದು ದೆಹಲಿಗೆ ತರಬೇತಿ ಪಡೆಯಲು ತೆರಳಿದರು. ಆದರೆ ಹಣಕಾಸಿನ ಸಮಸ್ಯೆ ಎದುರಾಗಿ ದೆಹಲಿಯಿಂದ ಬೆಂಗಳೂರಿಗೆ ಬಂದರು. ಬೆಂಗಳೂರಿಗೆ ಬಂದ ನಂತರ ಮತ್ತೆ ಉದ್ಯೋಗಕ್ಕೆ ಸೇರಿಕೊಂಡರು.
ಇವರ ಸಾಧನೆ ಒಂದು ದಿನ ಅಥವಾ ಒಂದು ವರುಷದ ಪಯಣವಲ್ಲ. ಇವರು ಮೊದಲು 2017 ರಲ್ಲಿ ಮೊದಲ ಬಾರಿಗೆ ಯುಪಿಎಸ್ ಪರೀಕ್ಷೆ ಬರೆದರು. ಹಾಗೂ 2019 ರಲ್ಲಿ ಸಂದರ್ಶನ ಹಂತವನ್ನು ತಲುಪಿ ಮತ್ತೆ ನಿರಾಶೆ ಅನುಭವಿಸಿದರು. ಸತತವಾಗಿ 2020, 2021, 2022 ರಲ್ಲಿ ಪರೀಕ್ಷೆ ಬರೆದರು ಸಹ ಪ್ರಿಲಿಮ್ಸ್ ಪಾಸ್ ಆಗುವಲ್ಲಿ ಕಷ್ಟ ಪಟ್ಟರು. 2023 ರಲ್ಲಿ ದೇಶಕ್ಕೆ 7 ನೇ ರ್ಯಾಂಕ್ ಗಳಿಸಿ ಸತತ ಪ್ರಯತ್ನ, ಶ್ರದ್ಧೆ, ಸಾಧಿಸಲೇ ಬೇಕು ಎಂಬ ಛಲ, ಆತ್ಮ ವಿಶ್ವಾಸ ಮನುಷ್ಯನನ್ನು ಸಾಧನೆಯ ಶಿಖರಕ್ಕೆ ಕೊಂಡೊಯ್ಯುತ್ತದೆ ಎಂಬುದನ್ನು ಸಾಧಿಸಿ ತೋರಿಸಿದರು.
ಮೆಚ್ಚುಗೆಯ ಸುರಿಮಳೆ :-
ರಾಷ್ಟ್ರಕ್ಕೆ 7 ನೇ ಸ್ಥಾನ ಗಳಿಸಿದ ವೈ.ಎಸ್ .ಕಾವ್ಯ ಅವರ ಸಾಧನೆ ಕುಟುಂಬದವರು ಹೆಮ್ಮೆ ಪಡುವ ಸಂಗತಿ ಆಗಿದೆ. ಕಾವ್ಯ ಅವರ ಸಾಧನೆಯನ್ನು ಮೆಚ್ಚಿದ ಕಡೂರು ಶಾಸಕರಾದ ಕೆಎಸ್ ಆನಂದ್ ಅವರು ಸನ್ಮಾನ ಮಾಡಿ ಅವರು ಓದಿದ ಪ್ರಾಥಮಿಕ ಶಾಲೆಗೆ 25 ಲಕ್ಷ ರೂಪಾಯಿಗಳನ್ನು ಅನುದಾನವನ್ನು ಕೊಡುವುದಾಗಿ ಘೋಷಿಸಿದ್ದಾರೆ. ಇವರ ಹುಟ್ಟೂರಿನ ಜನರು ಹಾಗೂ ಬಂಧು ಮಿತ್ರರು ಇವರ ಸಾಧನೆಯ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ವೈ.ಎಸ್ .ಕಾವ್ಯ ಅವರ ಸಂತಸದ ಮಾತುಗಳು :-
ಸಾಕಷ್ಟು ಸವಾಲುಗಳನ್ನು ಎದುರಿಸಿದ ನಂತರ ನನಗೆ ಈ ಗೆಲುವು ಸಿಕ್ಕಿದೆ. ಪ್ರತಿ ಹಂತದಲ್ಲಿಯೂ ನನ್ನ ಕುಟುಂಬ ನನ್ನ ಬೆಂಬಲಕ್ಕೆ ನಿಂತಿತ್ತು. ಪ್ರೀಲಿಮ್ಸ್ ನಲ್ಲಿ ನನಗೆ ಬಹಳ ಸೋಲು ಕಂಡಿತು. ನನಗೆ ಸರಿಯಾದ ಮಾರ್ಗವನ್ನು ಕಂಡುಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು. ನನಗೆ ಬೆಂಬಲವಾಗಿ ನನ್ನ ಸೋದರ ಸಂಬಂಧಿ ಹಾಗೂ ನನ್ನ ಸ್ನೇಹಿತರು ನನಗೆ ಬಹಳ ಸಹಾಯ ಮಾಡಿದರು. ಪರೀಕ್ಷೆ ಎದುರಿಸುವ ಬಗ್ಗೆ ಹಾಗೂ ತಯಾರಿಯ ಬಗ್ಗೆ ಸಾಕಷ್ಟು ಚರ್ಚೆ ಮಾಡುತ್ತಿದ್ದೆವು. ಅಂತೆಯೇ 7ನೇ Rank ಬಂದಿರುವುದು ನನಗೆ ಬಹಳ ಸಂತಸ ತಂದಿದೆ ಎಂದು ಹೇಳಿದರು.
ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಆದಾಯ ತೆರಿಗೆ ಹಾಗೂ GST ಪ್ರಕಾರ UPI ವಹಿವಾಟಿನ ಮಿತಿಯ ಬಗ್ಗೆ ತಿಳಿಯಿರಿ
ಇದನ್ನೂ ಓದಿ: HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳದ ವಾಹನ ಸವಾರರಿಗೆ ರಾಜ್ಯ ಸರ್ಕಾರವು ಶುಭಸುದ್ದಿ ನೀಡಿದೆ.